ಕಲಿಕೆ, ಸುತ್ತಾಳ್ವಿಕೆ ಮತ್ತು ಶಾಂತಿ!

(ತಿಟ್ಟ: ಅಸರ್ ವರದಿ)
ಕಲಿಕೆಯಲ್ಲಿ ಹಿನ್ನಡೆ ಎಂಬುದು ಈವೊತ್ತಿನ ಜಗತ್ತಿನಲ್ಲಿ ಒಂದು ತೊಡಕಶ್ಟೇ ಅಲ್ಲದೆ ಬರ-ಬರುತ್ತಾ ಒಂದು ಗಂಡಾಂತರವೆಂದೇ ಗೋಚರವಾಗುತ್ತಿದೆ. ಬೆಳವಣಿಗೆ, ಜಾಗತೀಕರಣ, ತೆರೆದ ಮಾರುಕಟ್ಟೆಯಂತಹ ಜಾಗತಿಕ ನಂಬಿಕೆಗಳನ್ನು ಅಪ್ಪಿಕೊಳ್ಳುತ್ತಿರುವ ದೇಶಗಳ ಮತ್ತು ಮಾರುಕಟ್ಟೆಗಳ ನಡುವಿನ ಪಯ್ಪೋಟಿಯಲ್ಲಿ ಗೆದ್ದು ಬೆಳಗಲು, ಬದುಕುಳಿಯಲು ಹೆಚ್ಚಿನ ಮಂದಿ ಬಳಕೆ ಮಾಡುತ್ತಿರುವ ಒಂದು ಪ್ರಮುಕ ಸಲಕರಣೆ ಕಲಿಕೆಯೇ. ಶಾಂತ ರೀತಿಯಲ್ಲಿ ಈ ಪಯ್ಪೋಟಿಯಲ್ಲಿ ಗೆಲ್ಲಲು ಕಲಿಕೆಯೊಂದೇ ಮನುಶ್ಯನಿಗೆ ಇವತ್ತು ತಿಳಿದಿರುವ ರೀತಿ. ಹೀಗಾಗಿ ಶಾಂತಿಯನ್ನು ಕಾಪಾಡಿಕೊಳ್ಳುವುದು ಒಂದು ಜನಾಂಗದ ಆಸೆಯಾಗಿದ್ದರೆ ಕಲಿಕೆಯೆಂಬ ಸಲಕರಣೆಯನ್ನು ಒಲಿಸಿಕೊಳ್ಳುವುದು ಅವರವರ ಕೆಲಸವೆಂದು ಆಯಾ ಜನಾಂಗದವರು ಅರಿತುಕೊಳ್ಳುವುದೇ ಒಳ್ಳೆಯ ಜೀವನದ ಗುಟ್ಟು.

ಹೀಗಿರುವಾಗ ಬಾರತದಲ್ಲಿ ಕಲಿಕೆಯೇರ್ಪಾಡು ಹೇಗೆ ಹದಗೆಡುತ್ತಿದೆ ಎಂದು ಹೇಳುತ್ತಿರುವ (ಪ್ರತಮ್ ಸಂಸ್ತೆಯೋರು ಹೊರತಂದಿರುವ) ಈ ವರದಿ ಜನರನ್ನು ಗಾಬರಿ ಪಡಿಸುವಂತಿದೆ. ಅಂದ ಹಾಗೆ, ಕರ್ನಾಟಕದ ಬಗೆಗಿನ ವರದಿಯನ್ನು ಇಲ್ಲಿ ಕಾಣಬಹುದು. ಬಾರತದಲ್ಲಿ ಕಲಿಕೆಯೆಂಬುದು ಜನರ ಕೈಯಲ್ಲೇ ಉಳಿಯದೇ (ರಾಜ್ಯ ಸರ್ಕಾರದ ಹಿಡಿತ ಎಳ್ಳಶ್ಟೇ ಇರುವ,) ಕೇಂದ್ರ ಸರ್ಕಾರದ್ದೇ ಬಿಗಿ ಹಿಡಿತದಲ್ಲಿರುವ ಜಂಟಿ ಪಟ್ಟಿಯಲ್ಲಿ ಇರುವುದೆಂಬ ನಿಜಾಂಶದೊಡನೆ ಈ ವರದಿಯನ್ನು ಬೆರೆಸಿ ಓದಿದಾಗ ಕಲಿಕೆಯಲ್ಲಿ ನಮ್ಮೆಲ್ಲರ ಹಿನ್ನಡೆಗೆ ಕೇಂದ್ರ ಸರ್ಕಾರದ ಮೂಗು-ತೂರಿಸುವಿಕೆ ಕಾರಣವೆಂದು ಹೇಳಲೇಬಹುದು.

ಮೇಲೆ ಹೇಳಿದಂತೆ ಬೆಳವಣಿಗೆಯ ಪಯ್ಪೋಟಿಗಳ ನಡುವೆಯೂ ಜಗತ್ತಿನಲ್ಲಿ ಶಾಂತಿ ಕಾಪಾಡಿಕೊಳ್ಳಲು ಇರುವ ದಾರಿ ಕಲಿಕೆ ಒಂದೇ. ಅದನ್ನು ಒಲಿಸಿಕೊಳ್ಳುವುದು ಅವರವರ ಹೊಣೆಯಾಗಿರುವಾಗ, ದೇಶದ ಎಲ್ಲ ಮಂದಿಯಿಂದಲೂ ಅತಿ ಹೆಚ್ಚಿನ ದೂರವಿರುವ ಕೇಂದ್ರ ಸರ್ಕಾರ ತನ್ನ ತೆಕ್ಕೆಯಲ್ಲಿ ಬಲದಿಂದ ಇರಿಸಿ ಕೊಂಡಿರುವುದು ಸಮಾಜದಲ್ಲಿ ಅಶಾಂತಿಯ ಬೀಜ ಬಿತ್ತಿದಂತಾಗಿದೆಯಶ್ಟೇ. ಈ ಹಿಂಸೆ ನಿಲ್ಲಬೇಕು. ಈ ಅವಿವೇಕ ತೊಲಗಬೇಕು.

ಕಲಿಕೆಯೇರ್ಪಾಡು ಇವತ್ತಿರುವ ಗೊಂದಲದ ಅವಸ್ತೆಯಿಂದ ಮುಕ್ತಿ ಹೊಂದಬೇಕು ಹಾಗೂ ಸರಳಗೊಳ್ಳಬೇಕು. ಕೇಂದ್ರದ ತೆಕ್ಕೆಯಿಂದ ಹೊರಗೆ ಬಂದು, ಕಲಿಕೆಯ ಸುತ್ತಾಳ್ವಿಕೆ ನೆರವೇರಬೇಕಾಗಿದೆ. ಕನ್ನಡಿಗರ ಕಲಿಕೆಯೇರ್ಪಾಡಿನ ಹೊಣೆ ಕನ್ನಡಿಗರ ತೆಕ್ಕೆಗೆ ಬಂದು ಸೇರಬೇಕು. ಆಗಲಾದರೂ ಕನ್ನಡಿಗರೆಲ್ಲ ಸೇರಿ ಕನ್ನಡ ಮಾದ್ಯಮದಲ್ಲಿ ಕಲಿಕೆಯೆಂಬುದನ್ನು ನನಸಾಗಿಸಿಕೊಳ್ಳಬೇಕು. ಕನ್ನಡಿಗರ ಮಕ್ಕಳು ಏನಾದರು ಕಲಿಯಲು ಮತ್ತೊಂದು ನುಡಿಯ ಮುಂದೆಯೋ, ಮತ್ತೊಂದು ನುಡಿಸಮುದಾಯದ ಮುಂದೆಯೋ ತಲೆಬಾಗದಂತೆ ಅತವಾ ಮತ್ತೊಂದು ಜನಾಂಗದ/ಪ್ರದೇಶದ/ಪರಿಸರದ ಒತ್ತೆಯಾಳಾಗದಂತೆ ಏರ್ಪಾಡಾಗಬೇಕು. ಪ್ರತಮ್ ಅವರ ವರದಿಯಲ್ಲಿ ಹೊರಬಿದ್ದಿರುವ ಮಾಹಿತಿ ಮುಂದೊಂದು ದಿನ ತಪ್ಪಾಗಬೇಕು. ತಾಯಿಯ ಹೊಟ್ಟೆಯಲ್ಲಿಂದಲೇ ಕಲಿಯುತ್ತಾ ಬರುವ ಪ್ರತಿಯೊಂದು ಮಗುವೂ ಶಾಲೆಗೆ ಹೋದ ಕೂಡಲೆ ಕಲಿಯುವುದರಲ್ಲಿ ಎಡವುವಂತ ಅನಾಹುತ ನಿಲ್ಲಬೇಕು, ಪ್ರತಿಯೊಂದು ಮಗುವೂ ತನ್ನಲ್ಲಿರುವ ಮೂಲ ಯೋಗ್ಯತೆಯಿಂದ ಹೊಳೆಯುವಂತೆ ಕಲಿಕೆ ಸಹಾಯ ಮಾಡುವಂತಾಗಬೇಕು.

ಜಾತಿಗಳ ಸರಳ ತಿರುಳು ಮತ್ತು ಶಾಂತಿ

(ತಿಟ್ಟ: kannadaquran.com)
ಮತ್ತೊಮ್ಮೆ ಹಿಂದುಗಳು ಮುಸ್ಲಿಮ್ ಸೋದರರ ಅನಿಸಿಕೆಗಳಿಗೆ ದಕ್ಕೆ ಉಂಟು ಮಾಡಿದ್ದಾರೆ ಎಂಬ ಕೂಗು ಕೇಳಿಬಂದಿದೆ. ಮೂಲವಾಗಿ ತಮಿಳಿನಲ್ಲಿ ತೆಗೆದಿರುವ ವಿಸ್ವರೂಪಮ್ ಎಂಬ ಓಡುತಿಟ್ಟವೊಂದು ಮುಸ್ಲಿಮರ ಮನಸ್ಸಿಗೆ ನೋವುಂಟು ಮಾಡುವಂತದ್ದು ಎಂದು ಹೇಳಿ ತಮಿಳುನಾಡಿನೊಳಗೆ ಅದರ ಪರದೆಯ ಮೇಲ್ಕಾಣುವಿಕೆಯನ್ನು ತಡೆಹಿಡಿಯಲಾಗಿದೆಯೆಂದು ವರದಿಗಳು ಬರುತ್ತಿವೆ. ಇದು ಮುಸ್ಲಿಮರಿಗಶ್ಟೇ ಅಲ್ಲ, ಬೇರೆಲ್ಲಾ ಜಾತಿಗಳ ಜನರಿರುವ ಈ ನಮ್ಮ ಸಮಾಜದ ಪ್ರತಿಯೊಬ್ಬ ಮಂದಿಗೂ ನೋವಿನ ವಿಶಯವಾಗಲಿದೆ.

ಆದರೆ ನಿಜಕ್ಕೂ ಈ ಎರಡು ದೊಡ್ಡ (ಬಾರತದಲ್ಲಿ ಅದನ್ನು ಪಾಲಿಸುವವರ ಅಂಕಿಯ ಅನುಸಾರ) ಜಾತಿಗಳ ಅನುಯಾಯಿಗಳ ನಡುವೆ ತಿಕ್ಕಾಟ ಇದೆಯೇ? ಇರಬೇಕೇ? ಅತವಾ ಇಲ್ಲದ ತಿಕ್ಕಾಟವನ್ನು ಯಾವುದೋ ಕಾರಣಕ್ಕೆ, ಯಾರೋ ಕಿಡಿಗೇಡಿಗಳು ಹುಟ್ಟಿಸಿ ಅದರ ದುರುಪಯೋಗ ಮಾಡಿಕೊಳ್ಳುತ್ತಿರಬಹುದೇ ಎಂಬ ಪ್ರಶ್ನೆ ಏಳುವುದು ಸಹಜವೇ. ಆದರೆ ಈ ಜಾತಿಗಳ ನಡುವೆ ತಿಕ್ಕಾಟ ಅತವಾ ಕಂಡರಾಗದಂತದ್ದು ಏನೂ ಇಲ್ಲವಾದರೆ ಇಂತಹ ತುಚ್ಚ ಕಾರಣಗಳಿಂದೆಲ್ಲಾ ಪದೇ-ಪದೆ ಶಾಂತಿಯ ಕೆರೆ ಏಕೆ ಕದಲಿ ಕೂರುತ್ತದ್ದೇವೆ? ಸಾವಿರಾರು ಸಾಲುಗಳಿಂದ ಬೆಳೆದುಬಂದಿರುವ ಸೋದರಿಕೆಯನ್ನು ಜಾತಿಯ ಈ ಅಂತರ ಮುರಿಯದಹಾಗೆ ಈ ಎರಡೂ ಜಾತಿಗಳ ನಂಬಿಕೆಗಳು ಏನು ಎಂದು ಒಂದೇ ವೇದಿಕೆಯ ಮೇಲೆ ಯಾಕೆ ಜನರು ಹಂಚಿಕೊಳ್ಳುತ್ತಿಲ್ಲ? ಅತವಾ ಅಂತಹ ಕೆಲಸ ಮಾಡಲು ಸಾದ್ಯವೇ ಆಗುತ್ತಿಲ್ಲವೇ? ಇದರ ಕಾರಣವಾದರೂ ಏನಿರಬಹುದು?

ಮುಸ್ಲಿಮರ ಪೂಜಿತ ಹೊತ್ತಗೆ ಕುರಾನ್ ಇನ ಕನ್ನಡ ರೂಪ ಎಂದು ಈ ಮಿಂದಾಣ ಹೇಳುತ್ತದೆ. ಇದರಲ್ಲಿ ಕುರಾನಿನ ವಚನಗಳನ್ನು ಪೂರ್ತಿ ಸಂಸ್ಕ್ರುತೀಕರಿಸಿ ಹೀಗೆ ಅರ್ತವೇ ಆಗದ ಹಾಗೆ ರೂಪಿಸಿ ಯಾರು ಇಟ್ಟಿದ್ದಾರೋ ತಿಳಿಯದು. ಸರಳವಾಗಿ ಅರ್ತವಾಗುವಂತ ಕನ್ನಡದಲ್ಲಿ ಕುರಾನ್ ಅನ್ನು ಎಲ್ಲಿ ಕಾಣಬೇಕೋ ತಿಳಿಯದೇ ಇರುವಂತ ಸ್ತಿತಿ ಇವತ್ತು ನಮ್ಮ ಸಮಾಜದಲ್ಲಿದೆ. ಒಟ್ಟಿನಲ್ಲಿ ಮುಸ್ಲಿಮರಲ್ಲಿ ಕನ್ನಡಿಗರು ಯಾರೂ ಕನ್ನಡವೆಂದರೆ ಸಂಸ್ಕ್ರುತವೇ ಎಂಬ ಗೊಂದಲದಿಂದ ಹೊರಗೇ ಬಾರದಂತೆ ಮಾಡಲು ಮತ್ತು ಕನ್ನಡದ ಕಾರಣದಿಂದ ಮಿಕ್ಕೆಲ್ಲರೊಡನೆ ಒಗ್ಗಟ್ಟಿನಿಂದ ಇರದೇ ಇರುವ ಹಾಗೆ ಮಾಡಲು ಈ ಬಗೆಯ ಅನುವಾದಗಳೂ ಉರಿಗೆ ತುಪ್ಪ ಸುರಿಯುತ್ತಿವೆಯೇನೋ?

ಸರಿಯಾದ ಕನ್ನಡದ ಪದಗಳನ್ನೇ ಬಳಸಿ ಅನುವಾದ ಮಾಡಿದ್ದರೆ ಕುರಾನ್ ಇನ ನಿಜವಾದ ಹಿತ-ವಚನಗಳನ್ನು ಬೇರೆ ಜಾತಿಯವರೂ ಅರಿತುಕೊಳ್ಳಬಹುದಿತ್ತು. ಇದೇ ಮಾತು ಹಿಂದು ಜಾತಿಯ ಪೂಜಿತ ಹೊತ್ತಗೆಯನ್ನೇನು ಹೊರತುಪಡಿಸೊಲ್ಲ. ಹಿಂದು ಜಾತಿಯ ಪೂಜಿತ ಹೊತ್ತಗೆ ಕ್ರುಶ್ಣ ನುಡಿದ ಬಗವದ್ಗೀತೆ ಎಂದು ಮನ್ನಣೆಗೆಯ್ದಿದೆ. ಇದರದ್ದೂ ಅದೇ ಕತೆ. ಇದರದ್ದೂ ಕೂಡ ಸರಳವಾಗಿ ಅರ್ತ ಮಾಡಿಕೊಳ್ಳಬಹುದಾದ ಕನ್ನಡಾನುವಾದ ಎಲ್ಲೂ ದೊರಕದಂತಾಗಿದೆ. ಅನುವಾದವೆಂದೇ ಇದ್ದರೂ ಅದು ಪೂರ್ತಿಯಾದ ಸಂಸ್ಕ್ರುತದಿಂದ ಕನ್ನಡದಂತೇ ಕಾಣುವ ಸಂಸ್ಕ್ರುತಕ್ಕೆ ಆಗಿದೆಯಶ್ಟೆ. ಇದರಿಂದ ಯಾರಿಗೂ ಏನೂ ತಿಳಿಯದ ಹಾಗಾಗಿದೆ.

ಕರ್ನಾಟಕದೊಳಗಿನ ಜನ ಕನ್ನಡವನ್ನೇ ಆಡುವವರಾಗಿದ್ದು ಈ ಎರಡೂ ಜಾತಿಗಳು ಹೊರಗಿನಿಂದ ಬಂದು ತಮ್ಮ ತಮ್ಮ ನುಡಿಗಳಲ್ಲಿದ್ದ ಅವರ ಹಿತವಚನಗಳನ್ನು ನಮಗೆಲ್ಲಾ ಕೊಟ್ಟಿವೆಯಶ್ಟೇ ಆದರೂ, ಆ ವಚನಗಳ ಸಾರವನ್ನು ನಾವೆಂದೂ ನಮ್ಮ ನುಡಿಯಾದ ಕನ್ನಡಕ್ಕೆ ಸರಿಯಾಗಿ, ಸರಳವಾದ ರೀತಿಯಲ್ಲಿ ಅನುವಾದ ಮಾಡದೇ ಹೋಗಿರುವುದು ನಾವು ನಮ್ಮ ಜವಾಬ್ದಾರಿಯಿಂದ ದೂರ ಹೋಗಿರುವುದನ್ನು ತೋರಿಸುತ್ತದೆ. ಅಶ್ಟೇ ಅಲ್ಲ, ಇದೇ ನಮ್ಮ ಈ ಕುರುಡು ತಿಕ್ಕಾಟಗಳಿಗೆ ಕಾರಣವಾಗಿದೆಯೆಂಬುದರಲ್ಲಿ ಈಗ ಸಂಶಯವೇ ಉಳಿಯುವುದಿಲ್ಲ.

ಬಗೆ-ಬಗೆಯ ಜಾತಿಗಳ ಏರ್ಪಾಡಿನ ನಡುವೆ ಬದುಕಬೇಕಾದ ಕರ್ಮ ನಮ್ಮೆಲ್ಲರದ್ದಾಗಿದೆ. ಇದನ್ನು ತಿಳಿದಿಯೂ ನಮ್ಮ ಜಾತಿಯ ತಿರುಳನ್ನು ಸರಿಯಾಗಿ ಅರ್ತ ಮಾಡಿಕೊಳ್ಳುವ ಕೆಲಸ ನಾವು ಮಾಡದೇ ಹೋಗುವುದು ಬೇಡ. ಅದರ ನಿಜ ತಿರುಳು ತಿಳಿಯುವುದು ನಮ್ಮೆಲ್ಲರ ಒಳಿತಿಗೆ ಅವಶ್ಯವೆಂಬ ಸರಳ ನಿಜವನ್ನು ಅರಿಯೋಣ.

ಯಾರ ಗಡಿ ಮತ್ತು ಯಾರ ಪಲಾಯನ?

(ತಿಟ್ಟ: kannada.oneindia.in)
ಕರ್ನಾಟಕ ರಾಜ್ಯದ ವಿದಾನ ಸಬೆಯ ಮುಕಂಡರನ್ನು ದೇಶದ ಗಡಿಯನ್ನೇ ಪಾರು ಮಾಡಿಸಿ ಸರ್ಕಾರವನ್ನು ಸುಲಬವಾಗಿ ಉಳಿಸಿಕೊಳ್ಳುವ ಪ್ರಯತ್ನ ಆಳ್ಮೆಬದಿಯ ಜನ ಮಾಡಿರಬಹುದು ಎಂಬ ಸುದ್ದಿ ಗಾಳಿಯಲ್ಲಿ ಹಾರಾಡುತ್ತಿದೆ. ಒಟ್ಟಿನಲ್ಲಿ ಮುಕಂಡರ ಕಚೇರಿಯಲ್ಲಿ ಶಾಸಕರ ರಾಜಿನಾಮೆ ಪಡೆದುಕೊಳ್ಳಲು ಯಾರೂ ಮುಂದಾಗಿರದೇ ಹೋಗಿರುವುದು ರಾಜ್ಯ ಸರ್ಕಾರದ ನಡಾವಳಿಗೆ ಅಡಚಣೆಯಾಗಿರುವುದು ಕಚಿತ.

ಈ ನಡುವೆ ದೇಶದ ಗಡಿಯೆಂಬುದರ ಆಶ್ರಯ ಪಡೆದುಕೊಂಡು ನಮ್ಮ ರಾಜ್ಯದ ಆಳ್ಮೆಬದಿಯವರು ತಮ್ಮ ಆಳುವ ಹಕ್ಕನ್ನು ಉಳಿಸಿಕೊಳ್ಳಲು ಮುಂದಾಗಿರುವುದು ವಿಚಿತ್ರವಾಗಿ ಕಾಣುತ್ತಿದೆ. ಇವರು ದಾಟಿರುವುದು ದೇಶದ ಗಡಿಯೆಂದು ಹೇಳಲಾಗುತ್ತಿದ್ದರೂ ಇವರು ಹೊರಟದ್ದು ನಮ್ಮ ರಾಜ್ಯವಾದ ಕರ್ನಾಟಕದ ಗಡಿಯೊಳಗಿನಿಂದಲೇ, ಮತ್ತು ಅದನ್ನು ದಾಟಿಯೇ ಅವರು ಹೊರದೇಶಕ್ಕೆ ಹೋಗಲಾಗುವುದು.

ಸರ್ಕಾರದ ಒಳಗಡೆ ಕುಳಿತಿರುವವರೇ ಇಂದು ವಿದಾನಸಬೆಯ ಮುಕಂಡರು ಎಲ್ಲಿಗೆ ಹೋಗಿರುವರು ಎಂದು ಪ್ರಶ್ನಿಸುವಂತ ಸನ್ನಿವೇಶಕ್ಕೆ ನಮ್ಮ ರಾಜ್ಯದ ಗಡಿಯ ಮೇಲೆ ನಮ್ಮ ರಾಜ್ಯ ಸರ್ಕಾರದ್ದೇ ಹಿಡಿತ ಇಲ್ಲದಿರುವುದೇ ಕಾರಣವಾಗಲ್ವೇ? ಒಂದು ವಿಮಾನ ನಿಲ್ದಾಣ ತಲುಪಿದ ತಕ್ಶಣ ರಾಜ್ಯದ ಸೀಮೆಯನ್ನು ದಾಟಿರುವುದಾಗಿಯೂ, ಅಲ್ಲಿನ ನೆಲಪ್ರದೇಶ ನಮ್ಮ ರಾಜ್ಯದೊಳಗೇ ಇದ್ದರೂ ಅದು ಕೇಂದ್ರದ ಹಿಡಿತದಲ್ಲಿದೆ ಎಂಬ ಏರ್ಪಾಡಿನಿಂದಾಗಿ ರಾಜ್ಯ ಸರ್ಕಾರಕ್ಕೆ ತಮ್ಮ ಮುಕಂಡರು ಎಲ್ಲಿಗೆ ಹೋಗಿದ್ದಾರೆ ಎಂಬ ಸುಳಿವೇ ಸಿಗಲಾಗದಂತ ಸನ್ನಿವೇಶ ಹುಟ್ಟಿರುವುದು ಆಳ್ಮೆಯೇರ್ಪಾಡಿನ ಕುಸಿತವಲ್ಲವೇ, ಮಂದಿಯಾಳ್ವಿಕೆಯ ಅವಮಾನವಲ್ಲವೇ?

ಕರ್ನಾಟಕ ಸರ್ಕಾರದ ಒಂದು ಮುಕ್ಯ ಹುದ್ದೆಯನ್ನು ನಿಬಾಯಿಸಬೇಕಾದವರು ಅದರಿಂದ ಪಲಾಯನ ಮಾಡುವಾಗ ನಮ್ಮ ಗಡಿಯನ್ನು ರಕ್ಶಿಸಬೇಕಾದವರು ನಮ್ಮವರೇ ಆದರೆ ನಮ್ಮ ಮಂದಿಯ ಒಳಿತನ್ನು ಮನದಲ್ಲಿಟ್ಟುಕೊಂಡು ರಾಜ್ಯದ ಹಿತಾಸಕ್ತಿಯ ವಿರುದ್ದವಾದ ಪಲಾಯನವನ್ನು ತಡಿದಾದರು ಇರುತ್ತಿದ್ದರು. ಆದರೆ ಇಂದಿನ ಸನ್ನಿವೇಶದಲ್ಲಿ ರಾಜ್ಯದ ಗಡಿಯೆಂಬುದನ್ನೇ ಮಂಪರು ಮಾಡಿಟ್ಟು ಎಲ್ಲವೂ ದೇಶದ ಗಡಿಯೆಂದೇ ರೂಪಿಸಿಟ್ಟಿರುವಾಗ ಯಾವ ರಾಜ್ಯ ಸರ್ಕಾರ ತಾನೆ ತನ್ನೊಳಗಿನ ಆಳ್ಮೆಯನ್ನು ತನ್ನ ಹದ್ಬಸ್ತಿನಲ್ಲಿ ಇಟ್ಟುಕೊಳ್ಳಲಾದೀತು? ಯಾವ ರಾಜ್ಯ ಸರ್ಕಾರದಿಂದ ತಾನೆ ತನ್ನ ಮಂದಿಯ ಒಳಿತನ್ನು ಕಾಪಾಡಲು ಮುಂದಾಗಲಾಗುವುದು? ದೇಶದ ಸಂವಿದಾನದಲ್ಲಿ ರಾಜ್ಯದ ಗಡಿಬಾಗವನ್ನು ದೇಶದ ಗಡಿಬಾಗವೆಂದು ಹೇಳುವುದರೊಂದಿಗೇ ಅದರ ಮೇಲಿನ ಹಕ್ಕನ್ನೂ ಕೇಂದ್ರಕ್ಕೆ ಚ್ಯುತಿಯಾಗುವುದು ತಪ್ಪಲ್ಲವೇ?

ಈ ತೊಂದರೆಗೂ ಒಂದು ಮದ್ದು ಇದೆಯೇ? ಆಳ್ಮೆಯೇರ್ಪಾಡಿನಲ್ಲಿ ಸರಳತೆ ತರುವುದು ಇದನ್ನು ಸರಿಪಡಿಸುವುದೇ? ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಆಡಳಿತದ ವಿಶಯಗಳ ಹಂಚಿಕೆಯಲ್ಲಿ ಸರಳತೆ ಮೂಡಿಬರಬೇಕಲ್ಲವೇ?

ಪ್ರತಿಯೊಂದು ರಾಜ್ಯದ ಗಡಿಯ ಮೇಲಿನ ಪೂರ್ತಿ ಹಕ್ಕು ಆಯಾ ರಾಜ್ಯ ಸರ್ಕಾರಕ್ಕೇಕೆ ಒಪ್ಪಿಸಬಾರದು? ಮುಂಬಯಿಯಲ್ಲಿನ ಕಡಲತೀರವನ್ನು ದೇಶದ ಗಡಿಯೆಂದು ಪರಿಗಣಿಸಿದ್ದಕ್ಕೆ ಮತ್ತು ಅದಕ್ಕೂ ರಾಜ್ಯ ಸರ್ಕಾರಕ್ಕೂ ಏನೂ ನಂಟಿಲ್ಲವೆಂಬ ಏರ್ಪಾಡಿನಿಂದಲೇ ತಾನೆ ೨೦೧೧ರ ನವೆಂಬರಿನಲ್ಲಿ ಮುಂಬಯಿ ಪಟ್ಟಣ ಬೀಕರ ಹೊರದಾಳಿಗೆ ತುತ್ತಾಗಿದ್ದು? ಕೇಂದ್ರದ ಬಲಗಳು ದೂರದ ಊರುಗಳಿಂದ ಬಂದು ಪಟ್ಟಣವನ್ನು ಹೊರದಾಳಿಗರಿಂದ ಕಾಪಾಡುವಶ್ಟರಲ್ಲಿ ಎಶ್ಟು ಮಂದಿ ಅಸುನೀಗಿದ್ದರು?

ಬೆಂಗಳೂರಿನ ಕಸ ತೊಂದರೆ ಮತ್ತು ಸರಳತೆ

ದೊಡ್ಡ ಪಟ್ಟಣ, ದೊಡ್ಡ ಕಸ! (ತಿಟ್ಟ: news.bbcimg.co.uk)
ತೊಂದರೆಗಳ ಬಗ್ಗೆ ಮಾತಾಡುವಾಗ ಬೆಂಗಳೂರು ಪಟ್ಟಣವನ್ನು ಹೇಗೆ ಮರೆಯಲಾದೀತು? ಹಾಗೇ ಇಲ್ಲಿ ತೊಂದರೆಗಳನ್ನು ಬಗೆಹರಿಸಲು ಮಾಡಲಾಗುತ್ತಿರುವ ಸಾಹಸಗಳನ್ನೂ ಮರೆಯಲಾಗೊಲ್ಲ!

ಇತ್ತೀಚೆಗೆ ಬೆಂಗಳೂರು ನಗರದಲ್ಲಿ ಕಸ ವಿಲೇವಾರಿಯೆಂಬ ಒಂದು ಹೆಮ್ಮಾರಿ ಪ್ರತಿದಿನ ಓದಲು, ಕಾಣಲು ದೊರಕಿತ್ತು, ಇವತ್ತಿಗೂ ಆ ತೊಂದರೆ ಬಗೆಹರಿಯದೇ ಉಳಿದಿದೆ.

ಕೈಗೇ ಸಿಗದಂತ ಜೋರಿನಿಂದ ಬೆಳೆಯುತ್ತಿರುವ ಬೆಂಗಳೂರು ಪಟ್ಟಣದಲ್ಲಿ ದಿನನಿತ್ಯ ಹೊರಬೀಳುವ ಕಸದ ಅಳತೆ ಸಾವಿರಾರು ಟನ್ ಗಳೇ ಇದೆ. ನ್ಯಾಯವಾಗಿ ಈ ಕಸವನ್ನು ಬಿಸಾಡಲೂ ಆಗೊಲ್ಲ, ಇಟ್ಟುಕೊಳ್ಳಲೂ ಆಗೊಲ್ಲ, ಆದರೆ ಬೆಂಗಳೂರಿನ ಮುನ್ಸಿಪಾಲಿಟಿಯೋರು ತೀರ್ಮಾನಿಸಿರುವುದು ಈ ಕಸವನ್ನೆಲ್ಲಾ ಸುತ್ತಲಿನ ಅಮಾಯಕ ಹಳ್ಳಿಗಳಿಗೆ ಸಾಗು ಹಾಕುವುದು, ಅಲ್ಲಿಯ ಸುತ್ತಲಿನ ಜಮೀನುಗಳಲ್ಲಿ ಈ ವಿಶದಂತ ಕಸವನ್ನು ಹೂತಿಡುವುದು, ಬದಲಿಗೆ ಆ ಹಳ್ಳಿಯವರಿಗೆ ಒಂದಿಶ್ಟು ದುಡ್ಡು ಕೊಡುವುದು. ಈ ರೀತಿ ಮಾಡುವುದರಿಂದ ಬೆಂಗಳೂರಿನಲ್ಲಿ ಕಾಣಲು ಕಸವೇನೋ ಉಳಿಯಲ್ಲ, ಆದರೆ ಸುತ್ತಲಿನ ಜಮೀನುಗಳಲ್ಲಿ ವಿಶ ಮಾತ್ರ ಸೇರುತ್ತಲೇ ಬರುತ್ತಿದೆ. ಈ ಜಮೀನುಗಳಲ್ಲಿ ಬೆಳೆವ ಸರಕುಗಳಲ್ಲಿ ಏನು ಸೇರುತ್ತಿದೆಯೋ ಊಹೆ ಮಾಡುವುದು ಕಶ್ಟವೇನಲ್ಲ. ಮೇಲಾಗಿ, ಹೆಚ್ಚಾಗಿ ನೆಲನೀರನ್ನೇ ಬಳಸುವ ಬೆಂಗಳೂರಂತಹ ಪಟ್ಟಣದ ಸುತ್ತಲೂ ನೆಲದ ಕೆಳಗೆ ಇಂತಹ ವಿಶವನ್ನು ಪಟ್ಟಣದ ಜನರೇ ತೀರ್ಮಾನಿಸಿ ಹೂತಿಡುತ್ತಿರುವುದು ಯಾರಿಗೆ ನ್ಯಾಯ, ಯಾರಿಗೆ ಅನ್ಯಾಯ ಮಾಡಿದಂತಾಯಿತು ಎಂಬ ಪ್ರಶ್ನೆ ಎದ್ದೇಳುವುದಿಲ್ಲವೇ?

ಈಗ ಇಂದು ತೊಂದರೆಯಂತೆ ಗೋಚರವಾಗದಿದ್ದರೂ, ಪ್ಲಾಸ್ಟಿಕ್ ಸೇರಿದಂತೆ ಇನ್ನಿತರ ವಿಶತುಂಬಿದ ಕಸಗಳು ನಮ್ಮ ನೆಲಗಳಲ್ಲಿ ಹೂತಿಡುತ್ತಾ ಸಾಗಿದಲ್ಲಿ ಮುಂದೆ ಇದೇ ಪ್ಲಾಸ್ಟಿಕ್ ವಿಶ ನಮ್ಮ ರಕ್ತಗಳಲ್ಲಿ ಸೇರಲು ಶುರುವಾದಾಗ ತೊಂದರೆಗಳ ಮಹಾಪೂರವೇ ಎದ್ದೇಳುವುದು ಕಚಿತ. ಬೆಳವಣಿಗೆಯೆಂಬ ಬೂತದ ಬೆನ್ನೇರಿರುವ ಇಂದಿನ ಪೀಳಿಗೆ ವಿಶದೊಡನೆ ಸರಸವಾಡುತ್ತಿರುವುದನ್ನು ಗಮನಿಸದೇ ಸಾಗುತ್ತಿದೆ, ಆದರೆ ಈ ಬೂತ ತನ್ನ ಮಿಕ್ಕ ಅವತಾರಗಳನ್ನು ತಳೆದಾಗ ಕಾಲ ಮಿಂಚಿ ಹೋಗಿರುತ್ತಾ ಎಂಬ ಪ್ರಶ್ನೆ ನಾವು ನಮ್ಮನ್ನೇ ಕೇಳಿಕೊಳ್ಳಬೇಕಲ್ವೇ?

ಹಾಗಾದರೆ ಏನು ಮಾಡಬಹುದು? ಬೆಂಗಳೂರಿನಂತಹ ಪಟ್ಟಣದ ಜೀವನದಲ್ಲಿ ಈ ಕಸ ಬೆರೆತು ಹೋಗಿದೆಯೇ? ಕಸ ಉತ್ಪನ್ನವಾದ ಬಳಿಕದ ಚಿಂತನೆಯೊಂದೇ ಮಾಡಿದರೆ ಸಾಕೇ, ಕಸ ಉತ್ಪನ್ನವಾಗದ ಹಾಗೆ ಮಾಡಲು ಏನು ಮಾಡಬಹುದು ಎಂದು ಯೋಚಿಸಲು ಆಗುವುದೇ? ಹಾಗೆ ಮಾಡಲು ಬದುಕಿನಲ್ಲಿ ಎಂತಹ ಬದಲಾವಣೆ ಅಗತ್ಯ? ಬದುಕಿನಲ್ಲಿ ಸರಳತೆ ಇದ್ದರೆ ಇದನ್ನು ಸಾದಿಸಬಹುದಾ? ಈ ಹೆಮ್ಮಾರಿಗೆ ಒಂದು ಸರಳ ಮದ್ದು ಇದೆಯೇ?

ಸರಳವೇ ಸರಿ!

ಇದು ಈ ಬ್ಲಾಗಿನ ಮೊದಲ ಪುಟ.

ನನ್ನ ಇಂಗ್ಲಿಶ್ ಬ್ಲಾಗನ್ನು ಹಿಂತಿರುಗಿ ಕಂಡಾಗ, ಒಮ್ಮೊಮ್ಮೆ ನಾನು ಬರೀ ಸಮಸ್ಯೆಗಳ ಬಗ್ಗೆಯೇ ಹೆಚ್ಚು ಮಾತಾಡುತ್ತಿದ್ದೇನಾ ಎಂದು ಅನಿಸತೊಡಗಿರುವ ದಿನಗಳಿವೆ! ಅದಕ್ಕಾಗಿ ಕನ್ನಡ ಕನ್ನಡಿಗ ಕರ್ನಾಟಕಕ್ಕೆ ಹೊಂದುವಂತೆ ಆಯಾ ತೊಂದರೆಗಳಿಗೆ ನನಗೆ ತೋಚಿದಂತೆ ಮದ್ದುಗಳನ್ನು ಇಲ್ಲಿ ಪ್ರಸ್ತಾಪ ಮಾಡುವೆನು. ನಿಮಗೇನನಿಸುತ್ತದೆಯೋ ಅದನ್ನು ಇಲ್ಲೂ ಹೇಳಿ, ಚರ್ಚೆ ಮಾಡೋಣ.

ನನ್ನ ಅನಿಸಿಕೆ ಏನೆಂದರೆ ಒಂದು ತೊಂದರೆಗೆ ಅತಿ ಸರಳವಾದ ಬಗೆ-ಹರಿವೇ (ಪರಿಹಾರ) ಅದರ ಅತ್ಯಂತ ಸರಿಯಾದ ಬಗೆ-ಹರಿವು. ಬೇರೆಲ್ಲವೂ ಆ ನಿಜವಾದ ಬಗೆ-ಹರಿವಿನ ಹೆಚ್ಚು ಕಶ್ಟಕರವಾದ ರೂಪಗಳಶ್ಟೇ. ಹಾಗಾಗಿ ಒಂದು ತೊಂದರೆ ಕಾಣಿಸಿದರೆ ಅದಕ್ಕೆ ಎಲ್ಲಕ್ಕಿಂತ ಸರಳವಾದ ಬಗೆ-ಹರಿವನ್ನು ಹುಡುಕುವುದು ನನ್ನ ಚಟವಾಗೋಗಿದೆ, ಏಕೆಂದರೆ ಎಲ್ಲಕ್ಕಿಂತ ಸರಿಯಾದ ಬಗೆ-ಹರಿವನ್ನು ಕಾಣುವ ಹಂಬಲ ನನಗೆ. 

ಈ ಕೆಲಸದಲ್ಲಿ ಕೈ ಜೋಡಿಸಲು ನಿಮಗೂ ಇಶ್ಟವಿದ್ದಲ್ಲಿ ನನ್ನನ್ನು ಇಲ್ಲಿಯೇ ಸಂಪರ್ಕಿಸಿ. ಕೈ ಜೋಡಿಸೋಣ. ನಿಮಗೆ ತಿಳಿದಂತೆ ತೊಂದರೆ + ಸರಳ ಬಗೆ-ಹರಿವಿನ ಜೋಡಿಯನ್ನು ನನಗೆ ಬರೆದು ಕಳಿಸಿ, ನಿಮ್ಮ ಹೆಸರಲ್ಲಿ ಅದನ್ನು ಇಲ್ಲಿ ಪ್ರಸಾರ ಮಾಡಲಾಗುವುದು. ನೀವು ಆಯ್ಕೆ ಮಾಡುವ ತೊಂದರೆಗಳು ಮೇಲೆ ಕಾಣುವ ಗುಂಪುಗಳಲ್ಲಿ ಯಾವುದಾದರು ಒಂದಕ್ಕಾದರೂ ಸೇರುವಂತಿರಲಿ.

ಅಲ್ಲಿಯವರೆಗೂ, ನಗ್ತಾ ಇರಿ :-)